ನ್ಯೂ ಹ್ಯಾಂಪ್‍ಷೈರ್ 
ಅಮೆರಿಕ ಸಂಯುಕ್ತ ಸಂಸ್ಥಾನಗಳ ಈಶಾನ್ಯ ಮೂಲೆಯಲ್ಲಿರುವ ಒಂದು ರಾಜ್ಯ. ಉತ್ತರದಲ್ಲಿ ಕೆನಡದ ಕ್ವಿಬೆಕ್ ಪ್ರಾಂತ್ಯ, ಪೂರ್ವದಲ್ಲಿ ಮೇನ್ ರಾಜ್ಯ ಮತ್ತು 29 ಕಿಮೀ ದೂರ ಅಟ್ಲಾಂಟಿಕ್ ಸಾಗರ. ದಕ್ಷಿಣದಲ್ಲಿ ಮ್ಯಾಸಚೂಸಟ್ಸ್ ರಾಜ್ಯ, ಪಶ್ಚಿಮದಲ್ಲಿ ವರ್ಮಾಂಟ್ ಇವೆ. ವಿಸ್ತೀರ್ಣ 24,097 ಚ.ಕಿಮೀ ಜನಸಂಖ್ಯೆ 7,37,681 (1970). ರಾಜಧಾನಿ ಕಾನ್‍ಕರ್ಡ್ (30,022) ರಾಜ್ಯದ ದಕ್ಷಿಣ ಮಧ್ಯದಲ್ಲಿದೆ. ಇತರ ಪ್ರಮುಖ ಪಟ್ಟಣಗಳು ಮ್ಯಾಂಚೆಸ್ಟರ್ (87,754), ನ್ಯಾಷವ (55,820), ಪೋಟ್ಸ್‍ಮತ್ (25,717), ಒರ್ಲಿನ್ (15,256), ಕೀನ್(20,467), ಡೋವರ್ (20,850) ಮತ್ತು ಲ್ಯಾಕೋನಿಯ (14,888).

	ಮೇಲ್ಮೈಲಕ್ಷಣ : ಇದನ್ನು ಗ್ರ್ಯಾನೈಟ್ ರಾಜ್ಯ ಎಂದು ಕರೆಯುವುದುಂಟು. ಈ ರಾಜ್ಯ ಪರ್ವತಮಯವಾಗಿದೆ. ಇಲ್ಲಿ ಸುಮಾರು 1,500 ಶಿಖರಗಳಿವೆ. ಹ್ವೈಟ್ ಶಿಖರ 1,917 ಮೀ ಎತ್ತರವಾಗಿದೆ. ರಾಜ್ಯದ ಮಾಧ್ಯ ಎತ್ತರ ಸಮುದ್ರಪಾತಳಿಯಿಂದ ಸುಮಾರು 305 ಮೀ.

	ರಾಜ್ಯದಲ್ಲಿ ಐದು ಮುಖ್ಯ ನದೀ ವ್ಯವಸ್ಥೆಗಳಿವೆ. ಅತ್ಯಂತ ದೊಡ್ಡ ನದಿ ಮೆರಿಮ್ಯಾಕ್. ಎರಡನೆಯದು ಕನೆಕ್ಟಿಕಟ್. ಉಳಿದ ಮೂರು ನದಿಗಳು ಸ್ಯಾಕೋ, ಆಂಡ್ರಸ್ಕಾಗಿನ್ ಮತ್ತು ಪಿಸ್ಕೇಟಕ್ವಾ.

	ವಾಯುಗುಣ : ನ್ಯೂ ಹ್ಯಾಂಪ್‍ಷೈರಿನ ವಾಯುಗುಣದಲ್ಲಿ ತೀವ್ರ ವ್ಯತ್ಯಾಸಗಳಾಗುತ್ತವೆ. ಚಳಿಗಾಲದಲ್ಲಿ -17ಲಿ ಸೆ ಗಿಂತ ಕೆಳಕ್ಕೆ ಉಷ್ಣತೆ ಇಳಿಯಬಹುದು. ಅನೇಕ ದಿವಸಗಳವರೆಗೆ ಹೀಗಿರುವುದುಂಟು. ಬೇಸಗೆ ತಂಪಾಗಿರುತ್ತದೆ. ವಾರ್ಷಿಕ ಮಾಧ್ಯ ಉಷ್ಣತೆ 44ಲಿ ಸೆ. ವಾರ್ಷಿಕ ಅವಪತನ 1016 ಮಿಮೀ. ಇದು ಸರ್ವ ಋತುಗಳಲ್ಲೂ ಹಂಚಿಕೆಯಾಗಿದೆ.

	ಸಸ್ಯಪ್ರಾಣಿಜೀವನ : ಸೇಕಡ 80ಕ್ಕೂ ಹೆಚ್ಚು ಪ್ರದೇಶ ಕಾಡು, ಬಿಳಿಯ ತೈಲಪರ್ನಿ ಅತ್ಯಂತ ಅಮೂಲ್ಯವಾದ ಮರ. ಅರಣ್ಯ ಪ್ರದೇಶದಲ್ಲಿ ಅನೇಕ ವನ್ಯ ಮೃಗಗಳಿವೆ. ಬಿಳಿಯ ಬಾಲದ ಚಿಗರೆ ಮತ್ತು ಕಪ್ಪು ಕರಡಿ ಅಧಿಕ ಸಂಖ್ಯೆಯಲ್ಲಿವೆ.  ಕಡವೆ ಅಪೂರ್ವವಾಗಿ ಕಾಣಬರುತ್ತವೆ. ಅವನ್ನು ಉಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಬೀವರ್ ಗಳನ್ನೂ ರಕ್ಷಿಸಲಾಗಿದೆ. ಮೊಲ, ಅಳಿಲು, ರ್ಯಾಕೂನ್, ನರಿ, ಮಿಂಕ್ಸ್ ಸಾಮಾನ್ಯವಾಗಿವೆ. ಬಾತು, ಕಾಡುಕೋಳಿ, ಗ್ರೌಸ್, ಜೀವಂಜೀವ ಮುಂತಾದ ಪಕ್ಷಿಗಳಿವೆ. ದಡದ ಬಳಿಯ ಸಮುದ್ರದಲ್ಲೂ ಒಳನಾಡಿನ ಜಲದಲ್ಲೂ ಈಚಿನವರೆಗೂ ಅನೇಕ ಬಗೆಯ ಮೀನುಗಳಿದ್ದುವು. ನೀರಿನ ಮಾಲಿನ್ಯದಿಂದಾಗಿ ಇವುಗಳ ಸಂಖ್ಯೆ ಕಡಿಮೆಯಾಗಿದೆ. ಈ ಪರಿಸ್ಥಿತಿಯನ್ನು ನಿವಾರಿಸಲು ತೀವ್ರಕ್ರಮ ತೆಗೆದುಕೊಳ್ಳಲಾಗಿದೆ.

	ಜನ : ಜನಸಂಖ್ಯೆಯ ದೃಷ್ಟಿಯಿಂದ ಇದು ಅಮೆರಿಕದ 42ನೆಯ ರಾಜ್ಯ. ಇಲ್ಲಿಯ ಜನರಲ್ಲಿ ಸೇಕಡ 60ರಷ್ಟು ಮಂದಿ ನಗರವಾಸಿಗಳು. ಬಿಳಿಯರ ಸಂಖ್ಯೆ ಹೆಚ್ಚು. 1970ರಲ್ಲಿ ಸೇಕಡ 10.4 ಕ್ಕೂ ಕಡಿಮೆ ನೀಗ್ರೋಗಳಿದ್ದರು. ಏಷ್ಯನ್‍ಸಂಜಾತ ಜನರ ಸಂಖ್ಯೆ ಇನ್ನೂ ಕಡಿಮೆ.

	ಕೃಷಿ, ಅರಣ್ಯಗಾರಿಕೆ :  ಈ ಶತಮಾನದಲ್ಲಿ ಒಟ್ಟು ಕೃಷಿಪ್ರದೇಶದ ವಿಸ್ತೀರ್ಣ ಗಮನಾರ್ಹವಾಗಿ ಕಡಿಮೆಯಾಗಿದೆ. ಜಮೀನುಗಳ ಸಂಖ್ಯೆಯೂ ಇಳಿದಿದೆ. ಆದರೆ ಜಮೀನಿನ ಸರಾಸರಿ ವಿಸ್ತೀರ್ಣ ಹೆಚ್ಚಾಗಿದೆ. ಕುಕ್ಕುಟ ಸಾಕುವುದು ಮುಖ್ಯ ಕಸುಬು. ಹೈನುಗಾರಿಕೆ  ಮತ್ತು ತರಕಾರಿ ಬೆಳೆಯುವುದೂ ಪ್ರಮುಖವಾಗಿವೆ.

	ಕೈಗಾರಿಕೆ : ಕೈಗಾರಿಕೆಗಳ ದೃಷ್ಟಿಯಿಂದ ರಾಷ್ಟ್ರದಲ್ಲಿ ಇದರ ಸ್ಥಾನ ಐದನೆಯದು. ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉಪಕರಣ, ಜವಳಿ, ಉಡುಪು ಕೈಗಾರಿಕೆಗಳಿವೆ. ಚೌಬೀನೆ, ಕಾಗದ ಮುಂತಾದವು ಅರಣ್ಯಾಧಾರಿತ ಕೈಗಾರಿಕೆಗಳು.

	ಸಾರಿಗೆ : 1920ರಲ್ಲಿ ರಾಜ್ಯದಲ್ಲಿದ್ದ ರೈಲುಮಾರ್ಗಗಳ ಉದ್ದ 2,003 ಕಿಮೀ 1970ರಲ್ಲಿ ಇದು ಅರ್ಧಕ್ಕೆ ಇಳಿದಿತ್ತು. 1970ರಲ್ಲಿ 6560 ಕಿಮೀ ಉದ್ದದ ರಾಜ್ಯ ಹೆದ್ದಾರಿಗಳಿದ್ದುವು. ಅಂತರರಾಜ್ಯ ಹೆದ್ದಾರಿಗಳ ಉದ್ದ 336 ಕಿಮೀ. ಸ್ಥಳೀಯ ಮಾರ್ಗಗಳು 16,000 ಕಿಮೀಗಳಿಗೂ ಹೆಚ್ಚು. ರಾಜ್ಯದಲ್ಲಿರುವ ಸುಮಾರು 40 ವಿಮಾನ ನಿಲ್ದಾಣಗಳ ಪೈಕಿ ಹೆಚ್ಚಿನ ಸಂಖ್ಯೆಯವು ಖಾಸಗಿ ಒಡೆತನದವು.

	ಆಡಳಿತ : ಆಡಳಿತದ ಮುಖ್ಯಸ್ಥ ಗವರ್ನರ್. ಅವನ ಅಧಿಕಾರಾವಧಿ 2 ವರ್ಷ, 2 ವರ್ಷಗಳ ಅವಧಿಗೆ ಚುನಾಯಿತರಾಗುವ 5 ಸದಸ್ಯರ ಸಮಿತಿಯೊಂದು ಅವನ ಸಹಾಯಕ್ಕಿರುತ್ತದೆ. ರಾಜ್ಯ ವಿಧಾನಮಂಡಲದ ಮೇಲ್ಮನೆ ಜನರಲ್ ಕೋರ್ಟ್. ಇದರ ಸದಸ್ಯರು ಪ್ರತಿ 2 ವರ್ಷಗಳಿಗೊಮ್ಮೆ ಚುನಾಯಿತರಾಗುತ್ತಾರೆ. ಇದರಲ್ಲಿ ಕನಿಷ್ಠ 400 ಸದಸ್ಯರಿರುತ್ತಾರೆ. ಕೆಳಮನೆಯಾದ ಪ್ರತಿನಿಧಿಗಳ ಸಭೆಯಲ್ಲಿ 375ರಿಂದ 400 ವರೆಗೆ ಸದಸ್ಯರಿರುತ್ತಾರೆ.

	ಶಿಕ್ಷಣ : ನ್ಯೂ ಹ್ಯಾಂಪ್‍ಷೈರ್ ವಿಶ್ವವಿದ್ಯಾಲಯದ ಸ್ಥಾಪನೆ 1866ರಲ್ಲಾಯಿತು. ಅದು ಡರ್‍ಹ್ಯಾಮ್‍ನಲ್ಲಿದೆ. ಹ್ಯಾನೋನಲ್ಲಿರುವ ಡಾರ್ಟ್‍ಮತ್ ಕಾಲೇಜು (1769) ಸುಪ್ರಸಿದ್ಧ ಖಾಸಗಿ ಶಿಕ್ಷಣ ಸಂಸ್ಥೆ. ಇದಲ್ಲದೆ ಮ್ಯಾಂಚೆಸ್ಟರ್ ನಲ್ಲಿ ಸೇಂಟ್‍ಆನ್‍ಸೆಲ್ಮ್ಸ್ ಕಾಲೇಜು (1889). ಹೂಕ್‍ಸೆಟ್‍ನಲ್ಲಿರುವ ಮೌಂಟ್‍ಸೆಂಟ್‍ಮೇರಿ ಕಾಲೇಜು (1934). (ನ್ಯಾಷವದಲ್ಲಿರುವ ರಿವಿಯರ್ ಕಾಲೇಜು (1933) ಇವು ಮುಖ್ಯವಾದುವು. 1945ರಲ್ಲಿ ಹೊಸದಾಗಿ 8 ಖಾಸಗಿ ಕಾಲೇಜುಗಳನ್ನು ತೆರೆಯಲಾಯಿತು. ರಾಜ್ಯದಲ್ಲಿ ಅನೇಕ ಜೂನಿಯರ್ ಕಾಲೇಜುಗಳೂ ಇವೆ.

	ಕಲೆ : ರಾಜ್ಯದಲ್ಲಿ ಅನೇಕ ಸುಪ್ರಸಿದ್ಧ ಕಲಾಸಂಸ್ಥೆಗಳಿವೆ. 1907ರಲ್ಲಿ ಸ್ಥಾಪಿತವಾದ ಮ್ಯಾಕ್‍ಡೊವೆಲ್ ಕಾಲೊನಿ ಸಂಗೀತಗಾರರಿಗೂ ಲೇಖಕರಿಗೂ ಪವಿತ್ರವೆನಿಸಿದೆ. ಮ್ಯಾಂಚೆಸ್ಟರ್‍ನಲ್ಲಿ ಕರಿಯರ ಕಲಾ ಗ್ಯಾಲರಿಯಿದೆ. ಡಾರ್ಟ್‍ಮತ್ ಕಾಲೇಜು ಲಲಿತಕಲಾ ಕೇಂದ್ರ. ಅನೇಕ ಚಿಕ್ಕ ಪಟ್ಟಣಗಳಲ್ಲಿ ಸಣ್ಣ ಕಲಾಕೇಂದ್ರಗಳೂ ವಸ್ತುಸಂಗ್ರಹಾಲಯಗಳೂ ಇವೆ. 32ಕ್ಕೂ ಹೆಚ್ಚು ಪ್ರವಾಸಿ ಸ್ಥಳಗಳಲ್ಲಿ ಬೇಸಗೆ ನಾಟಕಗೃಹಗಳುಂಟು.

	ಇತಿಹಾಸ : 1623ರಲ್ಲಿ ಈಗಿನ ನ್ಯೂ ಹ್ಯಾಂಪ್‍ಷೈರ್ ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ವ್ಯಾಪಾರಗಳಿಗಾಗಿ ಒಂದು ವಸತಿ ಸ್ಥಾಪನೆಯಾಯಿತು. 1629ರಲ್ಲಿ ಜಾನ್ ಮೇಸನ್ ಮತ್ತು ಇತರರಿಗೆ ಬ್ರಿಟಿಷ್ ದೊರೆಯಿಂದ ದತ್ತಿಯಾಗಿ ಬಂದಿದ್ದ ಮೆರಿಮ್ಯಾಕ್ ಮತ್ತು ಪಿಸ್ಕೇಟಕ್ವಾ ನದಿಗಳ ನಡುವಿನ ಪ್ರದೇಶಕ್ಕೆ ಇಂಗ್ಲಿಷ್ ಹ್ಯಾಂಪ್‍ಷೈರ್ ಕೌಂಟಿಯನ್ನನುಸರಿಸಿ ನ್ಯೂ ಹ್ಯಾಂಪ್‍ಷೈರ್ ಎಂದು ಹೆಸರಿಡಲಾಯಿತು. ಆರಂಭದಲ್ಲಿ ಡೋವರ್, ಪೋಟ್ರ್ಸ್‍ಮತ್, ಎಕ್ಸ್‍ಟರ್ ಮತ್ತು ಹ್ಯಾಂಪ್ಟನ್‍ಗಳು ಮುಖ್ಯ ವಸತಿಗಳಾಗಿದ್ದುವು. 1641ರಿಂದ 1679ರ ವರೆಗೆ ಈ ಪ್ರದೇಶ ಮ್ಯಾಸಚೂಸೆಟ್ಸ್‍ನ ವಸಾಹತು ಸರ್ಕಾರದ ಆಡಳಿತಕ್ಕೆ ಒಳಪಟ್ಟಿತು. 1679ರಲ್ಲಿ ನ್ಯೂ ಹ್ಯಾಂಪ್‍ಷೈರ್ ಪ್ರತ್ಯೇಕ ಬ್ರಿಟಿಷ್ ಪ್ರಾಂತ್ಯವಾಯಿತು. 1776ರಲ್ಲಿ ಇದು ಸ್ವಾತಂತ್ರ್ಯವನ್ನು ಘೋಷಿಸಿತು. ಇದು 1788ರಲ್ಲಿ ಸಂಯುಕ್ತ ಸಂಸ್ಥಾನದ ಸಂವಿಧಾನಕ್ಕೆ ಅನುಮೋದನೆ ನೀಡಿತು.
(ಜಿ.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ